Tuesday, November 29, 2016

ಶಿವನ ಕೃಪೆ ಇರಲಿ...

ಶಿವನ ಕೃಪೆ ಇರಲಿ...

ಅ ಆ ಇ ಈ ಹೇಳಿಕೊಟ್ಟ ಅಮ್ಮ ಸುಮ್ಮನಾದಳು
ವ್ಯಾಕರಣ ಕಲಿಸಿದ ಮೇಸ್ತ್ರು ಈಗ ಅಜ್ಜ ಆಗಿರಬಹುದು..!!
ಬದುಕಲ್ಲಿ ಏನಿಲ್ಲ.! ಎಂದ ಅಪ್ಪ,
ಅವರವರ ಕರ್ಮಕ್ಕೆ ಎಷ್ಟೆಂದು ಪಾಲು ಲೆಕ್ಕ ಹಾಕಿಯಾನೇ ಆ ಭಗವಂತ..

ಕೆಟ್ಟ ಕುಂಟ ನೆಪ, ಪೋಲಿತನದ ಮಾತು, ಆಟಗಳನ್ನು
ಒಳ್ಳೆಯದೆಂದೇ  ಉದ್ಘೋಷಿಸಿದ
ಸ್ನೇಹಿತ ಮಹಾನುಭಾವಿಗಳು..
ಎಲ್ಲದಕ್ಕೂ ಹಣೆಗೆ ಕಪ್ಪುಹಲಗೆ ಹಾಕಿ
ತಪ್ಪು ಎಂದು ಗೀಚುವ ಮನೆಮಂದಿ ಊರಿನವರು..

ದಾರಿಯಲ್ಲಿ ಹೋಗುವಾಗ ಬುದ್ಧಿ ಹಾಳಾಗೋತನಕ ಮಂಡೆ
ಬಿಸಿಮಾಡುವ ಆ ಸೂರ್ಯನಿಗೆ ಕಂಬಳಿ ಒದ್ದಿಸಿ,
ಕತ್ತಲಲ್ಲೆ ಟಾರ್ಚು ಇಡಿದು
ಬರೆದು ಬರೆದು ಬೆರಳುಗಳಿಗೆ ಜೋಂಪಿಡಿದಾಗ
ಕಣ್ಣುಗಳು ಪಿಳಿ ಪಿಳಿ ಕೆಂಪಾಗಿ ಅರಳಿದಾಗ
ಕಂಬಳಿ ತೆಗೆದು ಸೂರ್ಯನ ನೆತ್ತಿಗೆ ತಣ್ಣೀರು
ಹಾಕೋ ಬದುಕಿಗೆ ಏನೆನ್ನ ಬಹುದು...?

ಎರಡೇ ದಿನ ಮಾಡಿ ಕೆಲಸವನ್ನ ಬದಲಿಸುತ್ತಿದ್ದ
ರಸ್ತೆಯ ಕೊನೆಯ ಮನೆಯವ.
ನಾ ಹೇಳೇ ಬಿಟ್ಟೆ
ಕಟ್ಟಕಡೆಯದಾಗಿ ಮಾಡುತ್ತಿರುವ ಕೆಲಸದಲ್ಲೇ
ಜೀವನವನ್ನ ರೂಪಿಸಿಕೊಳ್ಳುತ್ತೇನೆ..
ತಿಂಗಳಾನುಗಟ್ಲೆ ನನ್ನ ಜುಟ್ಟು, ಜನಿವಾರನ
ಬಾಂಡಲಿಯಲಿ ಹಾಕಿ ಕೆಂಪಾಗಿ ಉರಿದು,
ಅಷ್ಟೋ ಇಷ್ಟೋ ಒಗ್ಗರಣೆ ಹಾಕಿ ಮುಕ್ಕುವವರಿಗೆ ಕೊಟ್ಟು
ಬರೋ ಸಂಬಳದಲ್ಲೇ ನನ್ನ ಜೀವನ
ನನ್ನ ನಂಬಿದವರ ಉದರ ಪೋಷಣೆ...

ಎಷ್ಟೊಂದು ಕನಸುಗಳಿದ್ದವು
ಈ ಪುಟ್ಟ ಕಣ್ಣುಗಳ ತುಂಬ..
ಎಲ್ಲವನ್ನೂ ಮರೆಸಿತೆ
ಈ ವಾಸ್ತವತೆಯ ಬಿಂಬ..

ಅಬ್ಬಬ್ಬ ಎಂದರೆ ಎಷ್ಟು ದಿನ
ಕೇವಲ ವರ್ಷಾನುಗಟ್ಟಲೆ
ಇಲ್ಲ ತಿಂಗಳು ಗಟ್ಟಲೆ
ಹಿರಿದಾದ ರಸ್ತೆಗಳು ಕಿರಿದಾಗಿ
ಮುಖದ ಮೇಲೆ ಹರಿದು
ಚರ್ಮವನ್ನ ಸುಕ್ಕುಗೆಡಿಸೋ ತನಕ..
ಮತ್ತೊಬ್ಬರ ಪಾಲಿಗೆ ಕಥೆಯಾಗುವ ತನಕ..

ಈ ಬದುಕು ಸಾಗುತಿರಲಿ..
ವಾಸ್ತವತೆಯ ಭೂತ ಕನಸುಗಳನ್ನು ನಂದಿಸದಿರಲಿ..
ಜೊತೆಗೆ ಶಿವನ ಕೃಪೆ ಇರಲಿ...

                          ಕಿರಣ್ ಆತ್ರೇಯ್...