Saturday, October 2, 2021

ಏಕಂ ಸತ್ ವಿಪ್ರಾ ಬಹುಧಾ ವದಂತಿ :- ದೇವನೊಬ್ಬನಾಮ ಹಲವು

ಏಕಂ ಸತ್ ವಿಪ್ರಾ ಬಹುಧಾ ವದಂತಿ :- ದೇವನೊಬ್ಬನಾಮ ಹಲವು :-ಭಾಗ-೦೪

ಸೃಷ್ಟಿ :- ಭಾಗ-೦೧

ಜಗತ್ತಿನ ಸೃಷ್ಟಿಯ ಬಗ್ಗೆ ಆಶ್ಚರ್ಯಜನಕವಾದ ವಿಷಯಗಳು  ವೇದಶಾಸ್ತ್ರಗಳಲ್ಲಿ ಅಡಗಿದ್ದರೇ ಅಂಥ ಶಾಸ್ತ್ರಗಳನ್ನು ಅನಧಿಕಾರಿಗಳು ಕೇವಲ ಸಂಸ್ಕೃತ ಜ್ಞಾನದ ಆಧಾರದ ಮೇಲೆ  ಮನಸೋ ಇಚ್ಛೆ ಅರ್ಥೈಸಿ  ಆ ವಿಷಯವನ್ನು ಮತ್ತಷ್ಟು ಚಿಂತಾಜನಕವಾಗಿ ಮಾಡುತ್ತಾರೆ. ವೇದಗಳಲ್ಲಿ  ಸಕಲ ಸೃಷ್ಟಿ ಅದರಲ್ಲೂ ಈ ಪೃಥ್ವಿಯನ್ನು ಸೃಷ್ಟಿ ಮಾಡಿದ ದೇವತೆಗಳ ಬಗ್ಗೆ ಸಾಕಷ್ಟು ಉಲ್ಲೇಖ ಬರುತ್ತದೆ.ಇಂದ್ರ , ರುದ್ರ , ವಿಷ್ಣು , ಪೂಷಾ , ಸವಿತೃ , ವಿಶ್ವಕರ್ಮ , ಅಗ್ನಿ ,ಸೋಮ ಭಾವವೃತ್ತ ಹೀಗೇ ನಾನಾ ದೆವತೆಗಳು ಈ ಪೃಥ್ವಿಯನ್ನು ಸೃಷ್ಟಿಸಿದ್ದಾರೆ ಎನ್ನುವ ವೇದಮಂತ್ರಗಳು ಸಿಗುತ್ತವೆ. 

ಆದರೇ ವಾಸ್ತವವಾಗಿ ಈ ಒಂದು ಪೃಥ್ವಿಯನ್ನು ಇಷ್ಟೊಂದು ದೇವತೆಗಳು ಸೃಷ್ಟಿ ಮಾಡಿದರೇ ? ಅಥವಾ  ಅಸಂಖ್ಯಾತ ಪೃಥ್ವಿಗಳಿವೆಯೇ ? ಇದ್ದರೇ ಎಲ್ಲರೂ ಸಮರ್ಥರೇ ಆದರು ಎಂಬುದು ತಾನೇ ಸ್ವತಸ್ಸಿದ್ಧವಾಘುತ್ತದೆ.  ಆದರೇ ಆತನು ತನಗೆರಡಿಲ್ಲದವನು , ಆ ಸರ್ವ ಶಕ್ತನಾದ ನಿರ್ವಿಕಾರ ,ನಿರಾಕರ ,ನಿರ್ಗುಣನಾದ ಪರಮೇಶ್ವರನು ನಿರ್ಮಾಣ ಮಾಡಿದನೇ ? ಎಂಬ ಪ್ರಶ್ನೆಗಳು ಎದ್ದುಕೊಳ್ಳುತ್ತವೆ. 

೧. ರುದ್ರನೇ ಈ ಪೃಥ್ವಿಯನ್ನು ಸೃಷ್ಟಿ ಮಾಡಿದನು  ಎಂದು ಪ್ರತಿಪಾದಿಸುವದಕ್ಕೆ ಸಾಕಷ್ಟು ವೇದ ಮಂತ್ರಗಳು ಸಿಗುತ್ತವೆ.   ಅವನಿಂದಲೇ ಮಿಕ್ಕಾದ ದೇವತೆಗಳೂ ,ಪಂಚಭೂತಗಳೂ ಹುಟ್ಟಿದವು ಎಂಬುದಾಗಿ ತಿಳಿಸುವ ವೇದಮಂತ್ರಗಳು ಉಪಲಬ್ಧವಿದೆ.ಆದ್ದರಿಂದ ರುದ್ರನ ಆರಾಧಕರು ರುದ್ರನೇ ಸರ್ವೋತ್ತಮ ಎನ್ನುತ್ತಾರೆ. ತಪ್ಪೇನೂ ಇಲ್ಲ. ಆದರೇ  ಈ ಅಭಿಪ್ರಾಯವನ್ನು ಸಮನ್ವಯದ ಹೊರತು  ಮತ್ತೊಬ್ಬರ ಮೇಲೆ ಹೇರುವದಕ್ಕಾಗುವದಿಲ್ಲ. 

೨. ವಿಷ್ಣುವೇ  ಈ ಪೃಥ್ವಿಯನ್ನು ಸೃಷ್ಟಿ ಮಾಡಿದನು  ಎಂದು ಪ್ರತಿಪಾದಿಸುವದಕ್ಕೆ ಸಾಕಷ್ಟು ವೇದ ಮಂತ್ರಗಳು ಸಿಗುತ್ತವೆ.  ಅವನಿಂದಲೇ ಮಿಕ್ಕಾದ ದೇವತೆಗಳೂ ,ಪಂಚಭೂತಗಳೂ ಹುಟ್ಟಿದವು ಎಂಬುದಾಗಿ ತಿಳಿಸುವ ವೇದಮಂತ್ರಗಳು ಉಪಲಬ್ಧವಿದೆ. ಆದ್ದರಿಂದ ವಿಷ್ಣುವಿನ ಆರಾಧಕರು ವಿಷ್ಣುವೇ ಸರ್ವೋತ್ತಮ ಎನ್ನುತಾರೆ.ತಪ್ಪೇನೂ ಇಲ್ಲ. ಆದರೇ  ಈ ಅಭಿಪ್ರಾಯವನ್ನು ಸಮನ್ವಯದ ಹೊರತು  ಮತ್ತೊಬ್ಬರ ಮೇಲೆ ಹೇರುವದಕ್ಕಾಗುವದಿಲ್ಲ. 

೩.ವಿಶ್ವಕರ್ಮನೇ ಈ ಪೃಥ್ವಿಯನ್ನು ಸೃಷ್ಟಿ ಮಾಡಿದನು  ಎಂದು ಪ್ರತಿಪಾದಿಸುವದಕ್ಕೆ ಬೆರಳೆಣಿಕೆಯಷ್ಟು  ವೇದ ಮಂತ್ರಗಳು ಸಿಗುತ್ತವೆ.  ಅವನಿಂದಲೇ ಮಿಕ್ಕಾದ ದೇವತೆಗಳೂ , ಪಂಚಭೂತಗಳೂ ಹುಟ್ಟಿದವು ಎಂಬುದಾಗಿ ನೇರವಲ್ಲದಿದ್ದರೂ  ಸಮನ್ವಯ ಮಾಡುವ ವೇದಮಂತ್ರಗಳು ಉಪಲಬ್ಧವಿದೆ. ಆದ್ದರಿಂದ ವಿಶ್ವಕರ್ಮನ ಆರಾಧಕರು ವಿಶ್ವಕರ್ಮನೇ ಸರ್ವೋತ್ತಮ  ಎನ್ನುತ್ತಾರೆ. ತಪ್ಪೇನೂ ಇಲ್ಲ. ಆದರೇ  ಈ ಅಭಿಪ್ರಾಯವನ್ನು ಸಮನ್ವಯದ ಹೊರತು  ಮತ್ತೊಬ್ಬರ ಮೇಲೆ ಹೇರುವದಕ್ಕಾಗುವದಿಲ್ಲ. 

ಹೀಗೇ ನಾನಾದೇವತಾ ಸ್ವರೂಪಗಳಿದ್ದರೂ ಆ  ನಾಮರೂಪ ವಿವರ್ಜಿತನಾದ ಪರಮೇಶ್ವರನು ತನ್ನ ಮಾಯಾ ಶಕ್ತಿಯಿಂದ ಈ ಸಕಲ ಜಗತ್ತನ್ನು ಸೃಷ್ಟಿಸಿದನು ಎಂದು ಹೇಳುವದಕ್ಕೆ ಅಡ್ಡಿಯಿಲ್ಲ. ಏಕೆಂದರೇ ಮೇಲೆ ಹೇಳಿದ ಎಲ್ಲಾ ನಾಮರೂಪಗಳಿಗೂ ಹೊರತಾದ ಆ ಸರ್ವ ಶಕ್ತನು ಸೃಷ್ಟಿಗೆ ಮೊದಲು ತಾನೊಬ್ಬನೇ ಇದ್ದನು ಎಂಬುದಾಗಿ  ವೇದಗಳು ಹೇಳುತ್ತಿವೆ. ಆದ್ದರಿಂದಲೇ  ಯಾರೇ ಆಗಲೀ ಅವರವರ ಕಲ್ಪನಾ ಸಾಮ್ರಾಜ್ಯದ  ಒಂದು ದೇವತೆಯನ್ನೇ  ಶ್ರೇಷ್ಠ ಎಂಬುದಾಗಿ ಹೇಳಿದರೇ ಅವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ.   

ವೇದಾಭಿಪ್ರಾಯವನ್ನು ಹೇಳಲು ಷಡಂಗ ಸಹಿತ ಸಮಗ್ರ ವೇದಗಳ ಅಧ್ಯಯನ ಮಾಡಿರಲೇ ಬೇಕು. ಇಲ್ಲವಾದಲ್ಲಿ ರುದ್ರನೇ ಶ್ರೇಷ್ಠ , ವಿಷ್ಣುವೇ ಶ್ರೇಷ್ಠ ಅಥವಾ ವಿಶ್ವಕರ್ಮನೇ ಶ್ರೇಷ್ಠ ಎನ್ನುವಂಥ ಉಪಪಂಗಡಗಳು ಹುಟ್ಟಿಕೊಂಡು ಪರಸ್ಪರ ಬಡಿದಾಡಿಕೊಳ್ಳುತ್ತಾರೆ. ಮತ್ತು ಈ  ದೇವತೆಗಳ ನಡುವೇ ಬಡಿದಾಟವನ್ನೂ ಮಾಡಿಸುತ್ತಾರೆ , ವಿಷ್ಣುವಿನ ಮುಂದೆ ರುದ್ರನು ಕೈಮುಗಿದುಕೊಂಡು ನಿಂತಿರುವ ಚಿತ್ರಗಳು ,  ರುದ್ರನ ಮುಂದೆ ವಿಷ್ಣು ಕೈಮುಗಿದುಕೊಂಡು ನಿಂತಿರುವ ಚಿತ್ರಗಳು ಅದೂ ಇಲ್ಲ ಎಂದರೇ ವಿಶ್ವಕರ್ಮನ ಮುಂದೇ ರುದ್ರ ವಿಷ್ಣು ಇಬ್ಬರೂ ಕೈಮುಗಿದುಕೊಂಡಿರುವ ಚಿತ್ರಗಳನ್ನು ಹಾಕುತ್ತ ವಿಕೃತ ಮನಸ್ಸನ್ನು ತೃಪ್ತಿಪಡಿಸಿಕೊಳ್ಳುತ್ತಾರೆ. ಆದರೇ ಆ ಸರ್ವಶಕ್ತನು ಇಂಥವರಿಗೆ ತನ್ನ ನಿಜಸ್ವರೂಪವನ್ನೂ ಎಂದಿಗೂ ಅನುಭವಕ್ಕೆ ತಂದುಕೊಳ್ಳಲು ಅವಕಾಶ ಮಾಡಿಕೊಡದೇ ಪ್ರಲಯದಲ್ಲೇ ಬಲವಂತ ಮೋಕ್ಷವನ್ನು ಕೊಡಿಸುತ್ತಾನೆ.

ಯಾರೇ ಆಗಲೀ ಯಾವುದೇ ದೇವತೆಯನ್ನು ವೇದ ಮಂತ್ರಗಳ ಆಧಾರದ ಮೇಲೆ ಅನ್ಯ ದೇವತೆಗಳಿಗಿಂತ ಶ್ರೇಷ್ಠ ಎಂಬುದಾಗಿ ಹೇಳಿದರೇ ಅವರು ಅವಶ್ಯವಾಗಿ ವೇದಗಳನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂಬುದು ದೃಢವಾಗುತ್ತದೆ. ಕೆಲವರೋ ಗಾಯತ್ರೀ ದೇವಿಯನ್ನು ಸ್ತ್ರೀ ದೇವತೆಯಲ್ಲ ,ತ್ವಷ್ಟೃವಿನ ಅಂಶ ಮುಂತಾದ ಅಪಭ್ರಂಶಗಳ ಆಗರವನ್ನೇ ತಲೆಯ ಮೇಲೆ ಹೊತ್ತುಕೊಂಡು ತಿರುಗಾಡುತ್ತಾರೆ. ಇವೆಲ್ಲಕ್ಕೂ ಉದಾಸೀನವೇ ಮದ್ದು ಎನ್ನುವಹಾಗಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಸನಾತನ ಧರ್ಮದ ಬುನಾದಿಯಾದ *ಏಕಂ ಸತ್* ದೇವನೊಬ್ಬ ನಾಮ ಹಲವು ಎಂಬದನ್ನು ದೃಢಪಡಿಸಲಿಲ್ಲ ಎಂದರೇ ಕತ್ತೆಕಿರುಬಗಳಿಗೆ ರಸದೌತಣ. 

ಈ ಬರಹದಲ್ಲಿ ವೇದಮಂತ್ರಗಳಲ್ಲಿ ಹೇಳಿರುವ ಸೃಷ್ಟಿ ಸಂಬಂಧ ಎಲ್ಲಾ ವಿವರಗಳನ್ನು ಕೊಡುತ್ತಾ ಯಾವ ವೇದಗಳಲ್ಲಿ ಯಾವ ಯಾವ ದೇವತೆಯು ಸೃಷ್ಟಿಗೆ ಕಾರಣ ಎಂಬುದಾಗಿ ಕ್ರಾಂತದರ್ಶಿಗಳಾದ ಋಷಿಗಳು ಕಂಡುಕೊಂಡಿದ್ದಾರೆ ಎಂಬುವದನ್ನು ತಿಳಿಸುಕೊಡುತ್ತಲೇ ಇದ್ದೇನೆ. ಈ ಬರಹದಲ್ಲಿ ಸಮನ್ವಯವೇ ಮೂಲ ಉದ್ದೇಶವಾಗಿರುವದರಿಂದ ಅನ್ಯಥಾ ಪ್ರತಿಪಾದನೆಗೆ ಅವಕಾಶವಿಲ್ಲ. ವಿಷಯ ಸಂಬಂಧ ಮಾತ್ರ ಚರ್ಚೆ ಮಾಡುಬೇಕೆಂಬುದು ನನ್ನ ಕೋರಿಕೆಯಾಗಿದ್ದರೂ ಅರಬೆಂದ ಮಡಕೆಗಳು ಇಲ್ಲ ಸಲ್ಲದ ದೊಂಬರಾಟ ಮಾಡುವದನ್ನು ಬಿಡುವದಿಲ್ಲ. ಅಂಥವರನ್ನು ಉದ್ದೇಶಪೂರ್ವಕಾಗಿ ಬ್ಲಾಕ್ ಮಾಡುತ್ತೇನೆ. ಮೊದಲಿಗೆ ತಮ್ಮ ಕಲ್ಪನೆಯ ದೇವರೇ ಶ್ರೇಷ್ಠನು ಎಂಬುದಾಗಿ ಹೇಳಿಕೊಂಡು ವೇದಗಳನ್ನು ಅನ್ಯಥಾಗ್ರಹಣ ಮಾಡಿಕೊಂಡು ಹೆಣಗಾಡುತ್ತಿರುವವರಿಗೆ ಕಾಲನ ರಸದೌತಣ :- 

ಅಥರ್ವ ವೇದ :  ಋಷಿಃ -ಭೃಗು , ದೇವತೇ - ಕಾಲ , ಛಂದಃ -ಅನುಷ್ಟುಪ್ 
ಕಾಲೋ ಹ ಭೂತಂ ಭವ್ಯಂ ಚ ಪುತ್ರೋ ಅಜನಯತ್ಪುರಾ | ಕಾಲಾದೃಚಃ ಸಮಭವನ್ ಯಜುಃ ಕಾಲಾದಜಾಯತ || (೧೯,೫೪.೩ ) ||

ಅಥರ್ವ ವೇದ :- ಭೃಗು ಮಹರ್ಷಿಯು ತನ್ನ ತಪಸ್ಸಿನ ಶಕ್ತಿಯಿಂದ ಕಾಲನೆಂಬ ದೇವತೆಯನ್ನು ಸಾಕ್ಷಾತ್ಕಾರ  ಮಾಡಿಕೊಳ್ಳುತ್ತಾನೆ.  ಕಾಲನೇ ತಂದೆಯು ಕಾಲನೇ ಪುತ್ರನು , ಕಾಲನೇ ಭೂತದಲ್ಲಿಯೂ ಇದ್ದವನೂ , ಭವಿಷ್ಯದಲ್ಲಿಯೂ ಇರುವವನು ಅವನೊಬ್ಬನೇ. ಮೊದಲು ಇದ್ದವನೂ ನಂತರವೂ ಇರುವವನು ಈಗಿಲ್ಲದಿರುವನೇನು ? ಕಾಲನಿಂದಲೇ ಉಸಿರಾಟದಷ್ಟೇ ಸಲಿಲವಾಗಿ ಋಗ್ವೇದ ,ಯಜುರ್ವೇದಗಳೇ ಮೊದಲಾದವು ಹೊರಹೊಮ್ಮಿತು. ಇಲ್ಲಿ ಕಾಲನೇ ಕಾಲಾತೀತನೂ ಎಂಬ ಸ್ಪಷ್ಟ ಅರ್ಥವಿದೆ. ಆದ್ದರಿಂದ ಕಾಲದಿಂದಲೂ ಎಲ್ಲವೂ ಹುಟ್ಟಿತು ಎಂಬ ನಿರ್ದೇಶವೂ ಇದ್ದೇ ಇದೆ. 

ಋಗ್ವೇದ :-ಮನಸ್ಸೂಕ್ತ   ಅಥವಾ ಮೃತ ಸಂಜೀವನೀ ಸೂಕ್ತ 
ಋಷಿ - ಬಂಧುರ್ಗೌಪಾಯನಃ , ದೇವತಾ * ಮನ ಆವರ್ತನಃ  ಛಂದಃ 
ಯತ್ತೇ ಭೂತಂ ಚ ಭವ್ಯಂ ಚ ಮನೋ ಜಗಾಮ ದೂರಕಮ್ | ತತ್ತ ಆ ವರ್ತಯಾಮಸೀಹ ಕ್ಷಯಾಯ ಜೀವಸೇ || ೧೦,೦೫೮.೧೨ ||

ಬಂಧುರ್ಗೌಪಾಯನ ಋಷಿಯು ಇದೇ ಕಾಲನನ್ನು *ಮನ ಆವರ್ತನ*  ಅರ್ಥಾತ್ ಮನಸ್ಸನ್ನು ಚಿಂತನೆಯಲ್ಲಿ ತೊಡಗಿಸುವ ದೇವತೆ  ಎಂಬುದಾಗಿ ಸಾಕ್ಷಾತ್ಕರಿಸಿಕೊಂಡು ಮನಃ , ಪ್ರಾಣಃ ಮತ್ತು ಆತ್ಮವೂ ಒಂದೇ ಎಂಬುದಾಗಿ ಕಂಡುಕೊಂಡಿದ್ದಾನೆ. 
ಇಲ್ಲಿ ವಿಶೇಷವಾಗಿ ಈ ಚೆತನವೊಂದೇ ಭೂತ ಭವಿಷ್ಯತ್ತುಗಳಲ್ಲಿರುವ ತತ್ತ್ವ ಎಂಬುದಾಗಿ ಕಂಡುಕೊಂಡಿರುವದು ಸಾಕ್ಷಾತ್ಕಾರದ ವಿಶೇಷ. ಈ ಸೂಕ್ತ ಪಠನದಿಂದಲೇ ಶ್ರೀಶಂಕರಾಚಾರ್ಯರು ಮೃತ ಬಾಲಕನನ್ನು ಪುನರ್ಜೀವಿತನನ್ನಾಗಿ ಮಾಡಿದರು ಎಂಬುದಾಗಿ ಪ್ರಸಿದ್ಧ ಕಥೆಯೂ ಇದೆ. ಈ ಮಂತ್ರಕ್ಕೆ ಮೃತಸಂಜೀವನೀ ಸೂಕ್ತ ಎಂಬ ಹೆಸರೂ ವಿಶೇಷವಾಗಿದೆ.

ಋಗ್ವೇದ ಪುರುಷ ಸೂಕ್ತ : 
*ಪುರುಷ ಏವೇದಂ ಯದ್ಭೂತಂ ಯಚ್ಚ ಭವ್ಯಂ || ೧೦.೯೦.೦೨|| *  " ರುಚಸ್ಸಾಮಾನಿ ಜಜ್ಞಿರೇ ,ಛಂದಾಗ್ಂ ಸಿ ಜಜ್ಞಿರೇ ತಸ್ಮಾತ್ ,ಯಜುಸ್ತಸ್ಮಾದಜಾಯತ ||೧೦.೯೦.೦೯||   ಎಂಬ ವೇದಮಂತ್ರವೂ ಇದನ್ನೇ ದೃಢ ಪಡಿಸುತ್ತಿದೆ.
ಋಗ್ವೇದ : ಇದೇ ಕಾಲನನ್ನು ನಾರಾಯಣ ಮಹರ್ಷಿಯು ಇದೇ ಕಾಲನನ್ನು  *ಪುರುಷ* ಎಂಬ ದೇವತೆಯ ರುಪದಲ್ಲಿ ಕಂಡುಕೊಳ್ಳುತ್ತಾನೆ. 

ಆದ್ದರಿಂದ ಕಾಲನೇ ಪುರುಷನು , ಪುರುಷನೂ ,  ಕಾಲನೂ ಮತ್ತು ಮನಸ್ಸೂ  ಎಂಬು ಸಿದ್ಧವಾಗಿ ಪುರುಷನೇ ಪುತ್ರನು ಕಾಲನೇ ತಂದೆ ಅಥವಾ ಕಾಲನೇ ಪುತ್ರನು ಪುರುಷನೇ ತಂದೆಯು ಎಂಬುದು ಸಿದ್ಧವಾಯಿತು. ಕಾಲವೂ ಮನಸ್ಸಿನ ವ್ಯಾಪಾರವೇ ಆಗಿದೆ , ಕಾಲಾತೀತನ ರೂಪವೇ ಅವ್ಯವಹಾರ್ಯವಾದ್ದರಿಂದ ಕಾಲಾತೀತನೂ ಕಾಲನೇ ಅಥವಾ  ಪುರುಷನೇ ಆಗಿದ್ದಾನೆ ಎಂಬುವದು ಸಮನ್ವಯವಾಯಿತು. 

ಹೀಗೇ ವೇದದ ಉದ್ದಗಲ ಯಾವ ನಾಮರೂಪಗಳನ್ನೇ ಹಿಡಿದು ಹೋದರೂ ಮೂಲದಲ್ಲಿ ಆ ಸರ್ವ ಶಕ್ತನಾದ  , ರುದ್ರ ,ವಿಶ್ವಕರ್ಮ ,ವಿಷ್ಣು ,ಮುಂತಾದ ಯಾವ ನಾಮ ರೂಪವಿಶಶೇಷಣಗಳಿಲ್ಲದ  ನಿರ್ವಿಕಾರ ,ನಿರಾಕರ ,ನಿರ್ಗುಣನಾದ ಪರಮೇಶ್ವರನು ನಿರ್ಮಾಣ ಮಾಡಿದನು ಎಂಬುವದು ಸಿದ್ಧವಾಗುತ್ತದೆ. ಮುಂದಿನ ಸಂಚಿಕೆಯಲ್ಲಿ  ರುದ್ರ ,ವಿಶ್ವಕರ್ಮ ,ವಿಷ್ಣು ,ಮುಂತಾದ  ಈ ಎಲ್ಲಾ ನಾಮಗಳು ಕೇವಲ ಆ  ಸರ್ವಶಕ್ತನ ಕಾರ್ಯಕರಣ ವಿಶೇಷವೇ ಇದರಲ್ಲಿ ಯಾವದೂ ಒಂದಕ್ಕಿಂತ ಮತ್ತೊಂದು ಭಿನ್ನವಲ್ಲ ಎಂಬುದಾಗಿ ತಿಳಿಸಿಕೊಡುತ್ತೇನೆ.

ಹರಿ ಓಮ್ ತತ್ ಸತ್
ಸತ್ಯಪ್ರಕಾಶ :-

ಏಕಂ ಸತ್ ವಿಪ್ರಾ ಬಹುಧಾ ವದಂತಿ :- ದೇವನೊಬ್ಬನಾಮ ಹಲವು :-ಭಾಗ-೦೫

ವೇದಗಳಲ್ಲಿ ಹೇಳಿರುವ ಎಲ್ಲಾ ನಾಮಗಳು ಕಾರ್ಯಕರಣ ವಿಶೇಷವೇ ಆಗಿದೆ.