*ಪಂಗುನಿ ಉತ್ತರಂ ಮಾಹಾತ್ಮ್ಯಂ.*
ಇತ್ತೀಚೆಗಷ್ಟೇ ಪಂಗುನಿ ಉತ್ತರಂ ಎಂಬ ವಿಶೇಷ ದಿನವನ್ನು 28.3.2021 ರಂದು ಸಂಭ್ರಮದಿಂದ ಆಚರಿಸಿದ್ದೇವೆ. ಇದು ಸಾಮಾನ್ಯವಾಗಿ ತಮಿಳುನಾಡಿನ ದೇವಸ್ಥಾನಗಳಲ್ಲೂ, ಕರ್ನಾಟಕ, ಆಂಧ್ರದಲ್ಲಿ ಶ್ರೀವೈಷ್ಣವ ಸಂಪ್ರದಾಯದ ಪೂಜಾ ಕೈಂಕರ್ಯಗಳು ಇರುವ ದೇವಸ್ಥಾನಗಳಲ್ಲೂ , ಮನೆಗಳಲ್ಲೂ ಆಚರಿಸುತ್ತಾರೆ. ಆದರೆ ಇದು ಕೇವಲ ಶ್ರೀವೈಷ್ಣವರಿಗಷ್ಟೇ ಮೀಸಲಾದ ಹಬ್ಬವಲ್ಲ. ಇದರ ವೈಶಿಷ್ಟ್ಯವನ್ನು ತಿಳಿದರೆ, ಎಲ್ಲರೂ ಸಂಭ್ರಮದಿಂದ ಕೊಂಡಾಡಬಹುದಾದ ಹಬ್ಬದ ದಿನ. ಆ ವಿಶೇಷ ಏನೆಂದು ತಿಳಿಸುವುದೇ ಈ ಲೇಖನದ ಉದ್ದೇಶ.
ಹಿಂದೆ ಕೃತಯುಗದಲ್ಲಿ ಸಮುದ್ರ ಮಥನ ನಡೆಯಿತಷ್ಟೇ. ಎಷ್ಟೋ ದಿನಗಳ ಕಾಲ ನಡೆದ ಕಾರ್ಯ ಅದು. ಅದೂ ದೇವಮಾನದಲ್ಲಿ! ಅದು ಒಂದು ಸಾಹಸವೇ ಸರಿ. ಇಂದಿನ ಕಾಲಮಾನದಲ್ಲೂ, ಈ ಕೃತಕ ಯುಗದಲ್ಲೂ ನಾವು ಊಹಿಸಿಕೊಳ್ಳಲಾಗದ ಒಂದು ಅದ್ಭುತ ದೈವಕಾರ್ಯ. ಈ ಸಮುದ್ರಮಥನದಲ್ಲಿ ಎಷ್ಟೋ ಅಪರೂಪದ ವಸ್ತುಗಳು ಕ್ಷೀರಸಮುದ್ರದಿಂದ ಮೇಲೆದ್ದು, ಅವುಗಳಲ್ಲಿ ಹಲವು ದೇವತೆಗಳ ಪಾಲಿಗೇ ಸೇರಿದವು. ಅಸುರರು ಐರಾವತವನ್ನೂ, ಉಚ್ಚೈಶ್ರವಸ್ಸನ್ನೂ, ಕೌಸ್ತುಭಮಣಿ ಮುಂತಾದವನ್ನೆಲ್ಲಾ ನಿರಾಕರಿಸಿ ಕೇವಲ ಅಮೃತದ ಮೇಲೆಯೇ ಕಣ್ಣಿಟ್ಟಿದ್ದರಿಂದ ಇವೆಲ್ಲಾ ದೇವತೆಗಳ ಪಾಲಾದವು. ಈ ಮಧ್ಯೆ ಉಂಟಾದ ಹಾಲಾಹಲವೆಂಬ ಭಯಂಕರ ವಿಷವನ್ನು ದೇವತೆಗಳ ಪ್ರಾರ್ಥನೆಯ ಮೇರೆಗೆ ಮಹಾರುದ್ರದೇವನೇ ತನ್ನ ಕಂಠದಲ್ಲಿ ಧರಿಸಿದ.
ಈ ಮಥನದಲ್ಲಿ ಕ್ಷೀರಾಬ್ಧಿಯಿಂದ ಉದಿಸಿದ ಅಪೂರ್ವ ರತ್ನವೇ ಶ್ರೀ ಮಹಾಲಕ್ಷ್ಮೀದೇವಿ. ಅವಳು ಹೀಗೆ ಅವತರಿಸಿದ ದಿನವೇ ಫಾಲ್ಗುಣ ಮಾಸದ ಉತ್ತರಾ ನಕ್ಷತ್ರದ ಶುಭದಿನ. ತಮಿಳಿನಲ್ಲಿ, ಅಂದರೆ ಸೌರಮಾನದಲ್ಲಿ ಫಾಲ್ಗುಣವನ್ನು ಪಂಗುನಿ ಮಾಸ ಎನ್ನುತ್ತಾರೆ.
ಹೀಗೆ ಪಾಲ್ಗಡಲಿನಿಂದೆದ್ದ ಮಹಾಲಕ್ಷ್ಮಿಯನ್ನು ದೇವತೆಗಳೂ, ಅಸುರರೂ ಬಿಟ್ಟ ಕಣ್ಣು, ತೆರೆದ ಬಾಯಿಗಳಿಂದ ಎವೆ ಇಕ್ಕದೇ ನೋಡತೊಡಗಿದರು. ಇಂಥಾ ಅಪೂರ್ವ ಸುಂದರಿ ತಮ್ಮನ್ನು ವರಿಸಬಾರದೇ ಎಂದೂ ಮನದಲ್ಲೇ ಆಸೆಪಟ್ಟು, ಅವಳ ಗಮನ ಸೆಳೆಯಲು ವಿಚಿತ್ರ ಹಾವಭಾವಗಳನ್ನೂ ಪ್ರದರ್ಶಿಸಿದರು. ಆದರೆ, ಲಕ್ಷ್ಮೀದೇವಿ ಇವರಾರನ್ನೂ ಕಡೆಗಣ್ಣಿಂದಲೂ ನೋಡದೆ, ಮೆಲ್ಲಮೆಲ್ಲನೆ ಅಡಿಯಿಟ್ಟು, ಆದಿಶೇಷನ ಮೇಲೆ ಮಲಗಿ ನಸುನಗುತ್ತಲೇ ಎಲ್ಲವನ್ನೂ ವೀಕ್ಷಿಸುತ್ತಿದ್ದ ಶ್ರೀಮನ್ನಾರಾಯಣನ ಬಳಿಸಾರಿ, ನಮಸ್ಕರಿಸಿ, ಅವನ ತೊಡೆಯನ್ನೇರಿ, ಎದೆಯ ಮೇಲೂ ಕಾಲಿಟ್ಟು ಅಲ್ಲೇ ಕುಳಿತುಬಿಟ್ಟಳು. ಅವಳು ಪಾದ ಊರಿದ ಜಾಗದಲ್ಲಿ ಶಾಶ್ವತವಾದ ಒಂದು ಚಿಹ್ನವೇ ಮಚ್ಚೆಯಂತೆ ಉಳಿದುಹೋಯಿತು. ಅದನ್ನೇ ಶ್ರೀವತ್ಸವೆನ್ನುತ್ತಾರೆ.
ಶ್ರೀಮನ್ನಾರಾಯಣನೂ ಅವಳನ್ನು ಪ್ರೀತಿಯಿಂದ ಆಲಂಗಿಸಿ, ಪತ್ನಿಯನ್ನಾಗಿ ಸ್ವೀಕರಿಸಿದ. ಲಕ್ಷ್ಮೀಪತಿಯಾಗಿ ಅವನೂ ಶೋಭಿಸಿದ.
ನಮಗೆಲ್ಲ ಶ್ರೀ ಮಹಾವಿಷ್ಣುವೇ ತಂದೆ. ಅವನ ಪತ್ನಿಯಾದ ಲಕ್ಷ್ಮೀದೇವಿಯೇ ನಮಗೆಲ್ಲಾ ತಾಯಿ. ಶ್ರೀ ಮಹಾವಿಷ್ಣುವಿಗೂ ಲಕ್ನ್ಮೀಪತಿತ್ವ ಎನ್ನುವುದು ಒಂದು ವಿಶಿಷ್ಟವಾದ ಬಿರುದು. ಅವಳು ಪಕ್ಕದಲ್ಲಿರುವುದರಿಂದಲೇ ದಂಡಧರ, ದುಷ್ಟ ಶಿಕ್ಷಕ ಎಂದೂ ಪ್ರಸಿದ್ಧನಾದ ಭಗವಂತನಿಗೆ ಕರುಣಾಸಾಗರ, ದಯಾಮಯಿ, ಶಿಷ್ಠರಕ್ಷಕ, ಭಕ್ತವತ್ಸಲ ಎಂಬ ಬಿರುದುಗಳು.
ಇನ್ನು ಪಾಮರರಾದ ನಮ್ಮ ಅವಸ್ಥೆಯನ್ನು ಸ್ವಲ್ಪ ನೋಡೋಣ. ನಾವೋ ಅನಂತ ಆಪರಾಧಗಳನ್ನು ಮಾಡಿ ಭಗವಂತನ ಮುಂದೆ ಕೈಮುಗಿದು ನಿಲ್ಲಲೂ ಯೋಗ್ಯತೆ ಇಲ್ಲದವರು. ನಮಗೆ ನಮಸ್ಕಾರ ಮಾಡಲೂ ಗೊತ್ತಿಲ್ಲ. "ಯಥಾ ತಥಾ ವಾsಪಿ ಸಕೃತ್ ಕೃತೋಂಜಲಿಃ" ಎನ್ನುತ್ತಾರೆ ಆಳವಂದಾರರು, ತಮ್ಮ ಸ್ತೋತ ರತ್ನದಲ್ಲಿ. ಅವರು ಭಗವದ್ರಾಮಾನುಜರ ಗುರುಗಳು. ಹೇಗೆ ಹೇಗೋ ಕೈ ಮುಗಿದರೂ ಅದನ್ನು ಅಂಜಲಿ, ನಮನ ಎಂದೇ ಸ್ವೀಕರಿಸುವನಂತೆ ಆ ದಯಾಮಯ. ಆದರೆ ಇವೆಲ್ಲಾ ಲಕ್ಷ್ಮೀದೇವಿ, ಆ ಮಹಾತಾಯಿ ಪಕ್ಕದಲ್ಲಿದ್ದಾಗ ಮಾತ್ರ. ನಾವು ಮಾಡಿದ ಅನಂತ ಅಪರಾಧಗಳನ್ನು ಮನ್ನಿಸುವಂತೆ ತನ್ನ ಪತಿಯ ಬಳಿ ಶಿಫಾರಸು ಮಾಡುವವಳೇ ಆಕೆ. ಇಂಥಾ ವಾತ್ಸಲ್ಯಮಯಿ ಮಹಾ ಲಕ್ಷ್ಮೀದೇವಿಯ ಅವತಾರದ ದಿನ ಈ ಫಾಲ್ಗುಣ ಮಾಸದ ಉತ್ತರೆಯ ಶುಭದಿನ. ಈ ದಿನವನ್ನು ಸಂಭ್ರಮದಿಂದ ಆಚರಿಸಿ, ಆ ಮಹಾಮಾತೆಗೆ ಕೃತಜ್ಞತಾಪೂರ್ವಕವಾಗಿ ಗೌರವಿಸಬೇಕಾದ ಒಂದು ಮಹತ್ವದ ದಿನ.
ಶ್ರೀಮನ್ನಾರಾಯಣನ ಒಬ್ಬ ಪತ್ನಿಯಾದ ಲಕ್ಷ್ಮೀದೇವಿಯ ಅವತಾರದಿನವೆಂದು ಪ್ರಸಿದ್ಧವಾದ ಈ ಸುದಿನ, ಅವನ ಇನ್ನೊಂದು ಪತ್ನಿಯಾದ ಭೂದೇವಿಗೂ ವಿಶೇಷವಾದ ದಿನವೇ. ಹೇಗೆಂದು ನೋಡಲು ನಾವು ತ್ರೇತಾಯುಗಕ್ಕೆ, ರಾಮಾಯಣದ ಕಾಲಕ್ಕೆ ಹೋಗೋಣ.
ಸೀತಾ ದೇವಿಯೂ ಭೂದೇವಿಯ ಅವತಾರವೆಂದು ಪ್ರಸಿದ್ಧವಿದೆಯಷ್ಟೇ. ಅವಳ ಅವತಾರವೂ ಈ ಶುಭದಿನದಿಂದೇ. ಅಂದರೆ, ಜನಕಮಹಾರಾಜ ಭೂಮಿಯನ್ನುಳುವಾಗ ಹೆಣ್ಣುಶಿಶುವೊಂದು ಸಿಕ್ಕಿ ಅದನ್ನು ತನ್ನ ಮಗಳಾಗಿ ಜನಕ ಮಹಾರಾಜ ಸ್ವೀಕರಿಸಿದ ದಿನ. ಆ ಶಿಶುವಿಗೆ ಸೀತಾ ಎಂದು ಹೆಸರಿಟ್ಟ ದಿನ. ಸೀತಾ ಮಾತೆಯೂ ಲಕ್ಷ್ಮೀದೇವಿಯಂತೆ ತನ್ನನ್ನು ಆಶ್ರಯಿಸಿದವರನ್ನೂ, ತನ್ನನ್ನು ಹಿಂಸಿಸಿದವರನ್ನೂ ಒಂದೇ ರೀತಿಯಾಗಿ ಅನುಗ್ರಹಿಸುವ ಮಮತಾಮಯಿ.
ಹೀಗೆ ಶ್ರೀದೇವಿ, ಭೂದೇವಿಯರಿಬ್ಬರ ಅವತಾರದ ಸುದಿನವೇ ಈ ಫಾಲ್ಗುಣ ಮಾಸದ ಉತ್ತರಾ ನಕ್ಷತ್ರದ ದಿನ.
ಮೂರನೆಯದಾಗಿ, ರಾಮಾಯಣದಲ್ಲೇ ಉಲ್ಲೇಖವಾಗಿರುವ ಇನ್ನೊಂದು ಮಹತ್ವವೂ ಈ ದಿನಕ್ಕೆ ಇದೆ.
ಸೀತೆಯನ್ನು ಕಳೆದುಕೊಂಡು ಪರಿತಪಿಸಿದ ಶ್ರೀರಾಮಚಂದ್ರಸ್ವಾಮಿ ಸುಗ್ರೀವನ ನೆರವಿನಿಂದ, ಮುಖ್ಯವಾಗಿ ಆಂಜನೇಯ ಸ್ವಾಮಿಯ ಸಮುದ್ರಲಂಘನ, ಸೀತಾನ್ವೇಷಣ, ಅಂಗುಲೀಯಕ ಪ್ರದಾನ ಅಶೋಕವನಭಂಜನ ಮುಂತಾದ ಅತಿಶಯ ಸಾಹಸಗಳಿಂದ ಸೀತೆಯಿರುವುದು ಲಂಕೆಯಲ್ಲೇ ಎಂದು ತಿಳಿದ ಮೇಲೆ, ರಾವಣನ ಮೇಲೆ, ವಾನರ ಸೈನ್ಯದೊಡನೆ ದಂಡೆತ್ತಿ ಹೋಗಲು ನಿರ್ಧರಿಸಿ, ಸೇನಾ ಪ್ರಯಾಣಕ್ಕೆ ಮುಹೂರ್ತವನ್ನು ಆರಿಸಿದ್ದು ಈ ದಿನವನ್ನೇ.
"ಉತ್ತರ ಫಲ್ಗುನೀ ಹ್ಯದ್ಯ, ಶ್ವಸ್ತು ಹಸ್ತಃ ಪ್ರವರ್ತತೇ." ಎನ್ನುತ್ತಾನೆ ರಾಮಚಂದ್ರ. "ನಾಳೆ ಹಸ್ತ ನಕ್ಷತ್ರ, ನನ್ನ ನಕ್ಷತ್ರವಾದ ಪುನರ್ವಸುವಿಗೆ ಅದು ಹೊಂದುವುದಿಲ್ಲ. ಇಂದು ಹಸ್ತ , ತಾರಾಬಲದ ಪ್ರಕಾರ ಅದು ನನಗೆ ಸಾಧನ ತಾರೆ." ಎಂದು ಅಂದೇ ಪ್ರಯಾಣ ಹೊರಟನಂತೆ.
ನಾಲ್ಕನೆಯದಾಗಿ ಹಾಗೂ ಬಹಳ ಮುಖ್ಯವಾಗಿ ಇದು ಭಗವದ್ರಾಮಾನುಜರು ಮೂರು ಗದ್ಯರೂಪದ ಸ್ತೋತ್ರಗಳನ್ನು ರಚಿಸಿ ಶ್ರೀರಂಗನಾಥನಿಗೂ, ರಂಗನಾಯಕಿ ಅಮ್ಮನವರಿಗೂ ಸಮರ್ಪಿಸಿ ಅವರ ಪಾದಗಳಲ್ಲಿ ಶರಣಾಗತಿ ಮಾಡಿದ ದಿನ. ತನಗಾಗಿ ಅಷ್ಟೇ ಅಲ್ಲ, ತನ್ನ ಹೆಸರನ್ನು ಹೇಳಿದ ಅಂದರೆ ತನ್ನನ್ನಾಶ್ರಯಿಸಿದ ಎಲ್ಲರಿಗೂ ಮೋಕ್ಷವನ್ನು ದಯಪಾಲಿಸಬೇಕೆಂದು ನಮ್ಮೆಲ್ಲರ ಪರವಾಗಿ ಅವರು ಭಗವಂತನನ್ನು ಪ್ರಾರ್ಥನೆ ಮಾಡಿದ ದಿನ. ಶರಣಾಗತಿ ಗದ್ಯ, ಶ್ರೀರಂಗ ಗದ್ಯ ಹಾಗೂ ವೈಕುಂಠಗದ್ಯ ಇವೇ ಆ ಮೂರು ಗದ್ಯಗಳು.
ಈ ಶುಭದಿನವನ್ನೇ ಶ್ರೀ ರಾಮಾನುಜಾಚಾರ್ಯರು ಶರಣಾಗತಿ ಮಾಡಲು ಏಕೆ ಆರಿಸಿಕೊಂಡರೆಂಬುದಕ್ಕೂ ಒಂದು ಬಲವಾದ ಕಾರಣವಿದೆ.
ಬನ್ನಿ! ಈಗ ನಾವೆಲ್ಲ ಶ್ರೀರಂಗಕ್ಕೆ ಹೋಗೋಣ. ಅಲ್ಲಿ ಶ್ರೀ ರಂಗನಾಥನ ಸಂನ್ನಿಧಿಗೂ ಅಮ್ಮನವರ ಸಂನ್ನಿಧಿಗೂ ಸ್ವಲ್ಪ ದೂರವೇ. ರಂಗನ ಸಂನ್ನಿಧಿ ಅತ್ಯಂತ ಒಳಗಿನ ಪ್ರಾಕಾರದಲ್ಲಿದ್ದರೆ, ಅಮ್ಮನವರ ಸಂನ್ನಿಧಿ ಆ ಪ್ರಾಕಾರದ ಹೊರಗೇ ಇದೆ. ಶ್ರೀರಂಗನಾಥನ ಉತ್ಸವ ಮೂರ್ತಿಯಾದ ನಂಪೆರುಮಾಳ್ ಈ ದಿನದಂದು ಮಾತ್ರ ಆಮ್ಮನವರ ಸಂನ್ನಿಧಿಗೆ ಬಿಜಮಾಡಿಸುತ್ತಾನೆ. ಅಂದು ಅದೇ ದೊಡ್ಡ ಉತ್ಸವ.
ವರ್ಷವಿಡೀ ತನ್ನ ಸಂನ್ನಿಧಿಗೆ ದಯಮಾಡಿಸದ ರಂಗನಾಥನ ಮೇಲೆ ರಂಗನಾಯಕಿ ಅಮ್ಮನವರಿಗೆ ಹುಸಿಕೋಪ. ಅಂದು ಮಾತ್ರ ತನ್ನ ಬಳಿ ಬಂದ ಪತಿಯ ಮೇಲೆ ದೇವಿ ಕೋಪಿಸಿಕೊಳ್ಳುತ್ತಾಳಂತೆ. ಈ ಪ್ರಣಯಕಲಹವನ್ನೂ ಉತ್ಸವದಲ್ಲಿ ಆಚರಿಸಿ ಅನುಭವಿಸುತ್ತಾರೆ, ಭಕ್ತರೂ, ಅರ್ಚಕರೂ. ಕೊನೆಗೆ ಅಮ್ಮವರ ಸಂನ್ನಿಧಿಗೆ ಹೊದಿಕೊಂಡಂತಿರುವ ವಿಶಾಲವಾದ ಮಂಟಪದಲ್ಲಿ ಈ ದಿವ್ಯದಂಪತಿಗಳಿಬ್ಬರೂ ಸಮಾಧಾನವಾಗಿ ಸೇರಿ, ಭಕ್ತಾದಿಗಳಿಗೆ ದರ್ಶನ ಕೊಡುತ್ತಾರೆ. ಆ ದಿನ ಪೂರ್ತಿಯೂ, ರಾತ್ರಿಯೂ ಸಹ ಅಮ್ಮನವರ ಜೊತೆಯಲ್ಲೇ ಶ್ರೀ ರಂಗನಾಥಸ್ವಾಮಿ ಸಂತೋಷದಿಂದ ಸರಸ ಸಲ್ಲಾಪ ಮಾಡಿಕೊಂಡು ಕಾಲ ಕಳೆಯುತ್ತಾರೆಂಬುದು ಐತಿಹ್ಯ. ಇವರು ದಿವ್ಯದಂಪತಿಗಳು. ಅಪ್ರಾಕೃತ ದಿವ್ಯ ಮಂಗಳ ದೇಹ, ರೂಪ ಹೊಂದಿರುವವರು. ಇವರನ್ನು ನಮ್ಮಂತೆಯೇ ಸಾಧಾರಣ ದಂಪತಿಗಳೆಂದು ಭಾವಿಸಬಾರದು. ಅವರ ಸಂಭಾಷಣೆ, ಸಲ್ಲಾಪ ಏನಿದ್ದರೂ ಅವರ ಮಕ್ಕಳಾದ ನಮ್ಮನ್ನು ಕುರಿತೇ. ಭಗವಂತನೋ ನಮ್ಮ ತಪ್ಪುಗಳನ್ನು ಕಂಡು ಇವರನ್ನು ಹೇಗೆ ತಿದ್ದುವುದೆಂದು ಯೋಚಿಸುತ್ತಿದ್ದರೆ, ಆ ಮಹಾತಾಯಿ ಇವರನ್ನು ಕ್ಷಮಿಸುವಂತೆ ಪತಿಯನ್ನು ಹೇಗೆ ಅನುನಯಿಸುವುದೆಂದೇ ಯೋಚಿಸುವಳಂತೆ. ಇಂಥಾ ಸಂದರ್ಭದಲ್ಲಿ ನಾವು ಅವರಿಬ್ಬರನ್ನೂ ಒಟ್ಟಿಗೆ ದರ್ಶನ ಮಾಡಿ ನಮಸ್ಕರಿಸಿದರೆ, ಅಮ್ಮನವರ ಆಶ್ವಾಸನೆಯೂ ಅಭಯವೂ ದೊರಕಿ, ಶ್ರೀರಂಗನಾಥನ ಕ್ಷಮೆಯೂ, ಅನುಗ್ರಹವೂ ದೊರಕುವುದೆಂದು ಅರಿತವರು ಭಗವದ್ರಾಮಾನುಜರು. ಈ ಸತ್ಯವನ್ನು ಅವರನ್ನಾಶ್ರಯಿಸಿದ ನಮಗೆಲ್ಲಾ ಮನಗಾಣಿಸಲೆಂದೇ ಆವರು ಅಂದೇ ಮೊದಲು ರಂಗನಾಯಕಿ ಅಮ್ಮನವರಲ್ಲಿ ಶರಣಾಗತಿ ಮಾಡಿ, ಶ್ರೀರಂಗನಾಥನಲ್ಲಿ ಅದನ್ನು ಒಪ್ಪಿಸಿಕೊಳ್ಳುವಂತೆ ಶಿಫಾರಸು ಮಾಡು ಎಂದು ಬೇಡಿಕೊಳ್ಳುತ್ತಾರೆ. ಮುಂದೆ ಶ್ರೀರಂಗನಾಥನೊಡನೆಯೇ ಸಾಕ್ಷಾತ್ತಾಗಿ ಸಂಭಾಷಿಸಿ, ತನ್ನನ್ನು ಒಪ್ಪಿಸಿಕೊಳ್ಳುವಂತೆ ಪ್ರಾರ್ಥಿಸುತ್ತಾರೆ. ರಂಗನಾಥನೂ ಅವರೊಡನೆ ಅಷ್ಟೇ ಸಹಜ ಸೌಲಭ್ಯದಿಂದ ಮಾತಾಡುತ್ತಾನೆ. ಅದೇ ಗದ್ಯರೂಪದ ಶರಣಾಗತಿ ಸ್ತೋತ್ರ. ಈ ಸ್ತೋತ್ರವು ಸರಳ ಸಂಸ್ಕೃತದಲ್ಲಿ ಸಂವಾದ ರೂಪದಲ್ಲಿದೆ. ಲಕ್ಷ್ಮೀಪತಿಗೂ ಯತಿಪತಿಗೂ ನಡೆದ ಅದ್ಭುತ ಸಂಭಾಷಣೆ ಅದು.
ರಾಮಾನುಜರು ಶರಣಾಗತಿ ಮಾಡಿದ್ದೇಕೆ? ತನಗೆ ಮೋಕ್ಷ ಬೇಕೆಂದೇ? ಅಲ್ಲ! ಎಷ್ಟಾದರೂ ಅವರು ಆದಿಶೇಷನ ಅವತಾರವಲ್ಲವೇ? ಅವರೂ ಶರಣಾಗತಿ ಮಾಡಬೇಕೇ ಎಂದೂ ನಾವು ಕೇಳಬಹುದು. ಖಂಡಿತವಾಗಿಯೂ ಅವರು ಮೋಕ್ಷವನ್ನು ಬೇಡಲೇ ಇಲ್ಲ. ಅವರು ಬೇಡಿದ್ದು ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಿಗಿಂತ ಮಿಗಿಲಾದ ಕೈಂಕರ್ಯವನ್ನು, ಅವರಿಬ್ಬರ ನಿತ್ಯಸೇವೆಯನ್ನು. "ನಿತ್ಯ ಕಿಂಕರತಾಂ ಪ್ರಾರ್ಥಯೇ." ಎಂದೇ ಬೇಡುತ್ತಾರೆ ಆಚಾರ್ಯರು, ಶರಣಾಗತಿ ಗದ್ಯದಲ್ಲಿ.
ತನಗಾಗಿ ಮಾತ್ರವಲ್ಲದೇ ತನ್ನ ಹೆಸರನ್ನು ಹೇಳಿದವರ ಪರವಾಗಿಯೂ ಈ ದಿವ್ಯದಂಪತಿಗಳನ್ನು ಪ್ರಾರ್ಥಿಸುತ್ತಾರೆ ಆಚಾರ್ಯರು. ತನ್ನನ್ನಾಶ್ರಯಿಸಿದವರಿಗೂ ಮೋಕ್ಷವನ್ನು ನೀಡುವಂತೆ ಭಗವಂತನಲ್ಲಿ ಕೇಳಿಕೊಳ್ಳುತ್ತಾರೆ. ಎಂಥಾ ಔದಾರ್ಯ! ಇಂಥಾ ಆಚಾರ್ಯರಿಗೆ ಇಲ್ಲ ಎನ್ನುತ್ತಾನೆಯೇ ರಂಗನಾಥ? "ತಂದೋಂ." ಎನ್ನುತ್ತಾನೆ. " ಸರಿ. ನಾನು ರಾಮಾನುಜದಾಸ ಎಂದವರಿಗೂ ಮೋಕ್ಷವನ್ನು ಕೊಟ್ಟೆ" ಎನ್ನುತ್ತಾನಂತೆ ರಂಗನಾಥ.
ಆಗಲೇ ಆಚಾರ್ಯರು ಶರಣಾಗತಿ ಗದ್ಯ, ಶ್ರೀರಂಗಗದ್ಯ ಮತ್ತು ವೈಕುಂಠಗದ್ಯಗಳೆಂಬ ಮೂರು ಗದ್ಯರೂಪದ ಸ್ತೋತ್ರಗಳನ್ನು ಅಲ್ಲಿಂದಲ್ಲೇ ರಚಿಸಿ ಸಮರ್ಪಿಸುತ್ತಾರೆ. ಅಲ್ಲದೇ, ಅವರೇ ನಿಯಮಿಸಿದ 74 ಪೀಠಸ್ಥರಾದ ಗೃಹಸ್ಥ ಉತ್ತರಾಧಿಕಾರಿಗಳಿಗೂ ಉಪದೇಶ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಅದೇ ಮಂಟಪದಲ್ಲಿ ಈ ಶುಭದಿನದಂದು ಈ ಮೂರೂ ಗದ್ಯಗಳನ್ನು ಪಾರಾಯಣ ಮಾಡುವ ಸಂಪ್ರದಾಯ ನಡೆದು ಬಂದಿದೆ.
ಶರಣಾಗತಿ ಗದ್ಯವು ಅಮ್ಮನವರೊಡನೆ ಮೊದಲು, ನಂತರ ರಂಗನಾಥನೊಡನೆ ರಾಮಾನುಜರು ನಡೆಸಿದ ಸುಂದರ ಸಂವಾದ ರೂಪದ ಸ್ತೋತ್ರ. ಇದು ಸಾಮಾನ್ಯವಾಗಿ ಪ್ರತಿದಿನ ಪ್ರಾತಃಕಾಲದಲ್ಲಿ ಪಠಿಸಬೇಕಾದ ಗದ್ಯ. ಇದು ವಿಸ್ತೃತವಾಗಿರುವುದರಿಂದ, ಇದನ್ನು ಪೃಥು ಗದ್ಯವೆಂದೂ ಹೇಳುತ್ತಾರೆ.
ಎರಡನೆಯದಾದ ಶ್ರೀರಂಗಗದ್ಯವನ್ನು ಮಿತಗದ್ಯ ಎನ್ನುತ್ತಾರೆ. ಇದರಲ್ಲೂ ರಂಗನಾಥನ ಸ್ತೋತ್ರವೇ ಮುಖ್ಯವಾಗಿದೆ. ಶರಣಾಗತಿ ಮಾಡಿದ ನಂತರದ ಉತ್ತರ ಕೃತ್ಯ ಎಂದೂ ಈ ಗದ್ಯವನ್ನು ಭಾವಿಸಬಹುದು.
ಮೂರನೆಯದಾದ ಶ್ರೀ ವೈಕುಂಠ ಗದ್ಯವು ಒಂದು ವಿಶೇಷವಾದ ವಿವರಣೆಗಳುಳ್ಳದ್ದಾಗಿದೆ. ವೈಕುಂಠಲೋಕವು ಶ್ರೀಮನ್ನಾರಾಯಣನ ನಿತ್ಯವಿಭೂತಿ. ಅಂದರೆ ಆವನು ಸದಾ ವಾಸಿಸುವ ಸ್ಥಳ. ಅದೊಂದು ಅಪ್ರಾಕೃತವಾದ ಲೋಕ. ಶುದ್ಧಸತ್ವ ಎಂಬ ದ್ರವ್ಯದಿಂದ ತನ್ನ ಸಂಕಲ್ಪದಿಂದಲೇ ಭಗವಂತನು ಸೃಷ್ಟಿಸಿದ ಒಂದು ಲೋಕ. ಎಲ್ಲ ಲೋಕಗಳಿಗಿಂದ ಮೇಲ್ಪಟ್ಟ ಲೋಕ.
*ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ,*
*ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ.* ಎಂದು ಗೀತೆಯಲ್ಲಿ ಶ್ರೀಕೃಷ್ಣನೇ ವರ್ಣಿಸಿರುವ ಲೋಕ. ಅವನು ಸರ್ವವ್ಯಾಪಿಯೇ ಆದರೂ ಇದು ಭಗವಂತನ ಶಾಶ್ವತವಾದ ವಾಸಸ್ಥಾನ. ಬೇರೆಲ್ಲ ಲೋಕಗಳೂ, ಎಲ್ಲಾ ಜೀವರಾಶಿಗಳ ಶರೀರಗಳೂ ಅವನ ವಾಸಸ್ಥಾನವೇ ಆದರೂ, ಅವೆಲ್ಲ ಅಳಿದು ಹೋಗುವಂಥವು.
ಆದರೆ ಈ ವೈಕುಂಠದ ಬಗ್ಗೆ ಅಲ್ಲಿಗೆ ಹೋಗಿ ಬಂದವರಾರೂ ನಮಗೆ ಹೇಳಿಲ್ಲವಲ್ಲ! ರಾಮಾನುಜರಿಗೆ ದಿವ್ಯದೃಷ್ಟಿಯಿಂದ ಗೋಚರವಾದ ಈ ಲೋಕವನ್ನು ನಾವು ಈ ಗದ್ಯವನ್ನು ಪಾರಾಯಣ ಮಾಡಿ ಅವರ ದಿವ್ಯ ದೃಷ್ಟಿಯಿಂದ ಕಂಡು ಹಾಡಿದ ಸ್ತೋತ್ರದ ಮೂಲಕವೇ ತಿಳಿದು, ಅನುಭವಿಸಿ, ಆನಂದಿಸಬೇಕು.
ಈ ಮೂರೂ ಗದ್ಯಗಳನ್ನು ನಾವೂ ಇಂದು ಮಾತ್ರವಲ್ಲದೆ, ಪ್ರತಿನಿತ್ಯವೂ ಪಠಿಸಿ ನಾವೂ ಆಚಾರ್ಯರು ತೋರಿಸಿದ ಹಾದಿಯಲ್ಲಿ ಸಾಗೋಣ. ಆಚಾರ್ಯರಿಗೆ ಆಶ್ವಾಸನೆ ಕೊಟ್ಟಂತೆ, ಶ್ರೀಮನ್ನಾರಾಯಣನು ರಾಮಾನುಜರನ್ನಾಶ್ರಯಿಸಿದ ನಮಗೆ ಖಂಡಿತ ಮೋಕ್ಷವನ್ನೀಯುವನು ಎಂಬ ದೃಢ ವಿಶ್ವಾಸವನ್ನು ಹೊಂದೋಣ.
ಇದು ಗದ್ಯತ್ರಯಗಳ ಒಂದು ಸ್ಥೂಲ ಪರಿಚಯ. ವಿಸ್ತಾರವಾದ ವಿವರಣೆಯನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.
ಶ್ರೀಮತೇ ರಾಮಾನುಜಾಯ ನಮಃ.
ಶ್ರೀಮದ್ರಾಮಾನುಜ ಚರಣೌ ಶರಣಂ ಪ್ರಪದ್ಯೇ.
🙏🙏🙏🙏🙏
ಕೃಪೆ: ಶ್ರೀ ಕೆ.ಎಸ್. ನಾರಾಯಣಾಚಾರ್ಯರು.
ನಿರೂಪಣೆ:
ನಿರ್ಮಲಾ ಶರ್ಮ.